Thursday 16 February 2012

ಬಜೆಟ್ ಬಗ್ಗೆ ನಮ್ಮ ಮನವಿಯ ಅಂತಿಮ ರೂಪ


ಇವರಿಂದ,
         ಕೃಷಿಕರ ಸಂವಾದ ಗುಂಪು
         ಅಂತರ್ಜಾಲ ತಾಣ(ಫೇಸ್‌ಬುಕ್)
ಇವರಿಗೆ,
        ಡಿ.ವಿ.ಸದಾನಂದ ಗೌಡ
        ಮಾನ್ಯ ಮುಖ್ಯಮಂತ್ರಿಗಳು
        ಕರ್ನಾಟಕ ಘನ ಸರಕಾರ

ಮಾನ್ಯರೇ,

ವಿಷಯ : ಮುಂದಿನ ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಬಗ್ಗೆ

ಆದರಣೀಯ ಮುಖ್ಯಮಂತ್ರಿಗಳಿಗೆ ಕೃಷಿಕರ ನಮಸ್ಕಾರಗಳು. ಮುಂದಿನ ದಿನಗಳಲ್ಲಿ  ರಾಜ್ಯದ ಬಜೆಟ್ ತಮ್ಮ ನೇತೃತ್ವದಲ್ಲಿ ಮಂಡನೆಯಾಗಲಿದೆ. ಕೃಷಿ ಕ್ಷೇತ್ರದಿಂದಲ ಬೆಳೆದಿರುವ ತಾವುಗಳು , ರೈತ ಹೋರಾಟಗಾರರೂ ಆಗಿದ್ದೀರಿ. ಹೀಗಾಗಿ ಕೃಷಿ ಕ್ಷೇತ್ರದ ಸಮಸ್ಯೆಗಳು ತಮಗೆ ಅರಿವಿದೆ ಅಂತ ಭಾವಿಸಿದ್ದೇವೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಾಗಿ ನಮ್ಮ ವಿನಂತಿ.ಈ ಹಿನ್ನೆಲೆಯಲ್ಲಿ  ನಮ್ಮ ಕೃಷಿ ಗುಂಪಿನ ಸದಸ್ಯರು ಬಜೆಟ್‌ನಲ್ಲಿ  ಕೃಷಿಗಾಗಿ ಈ ಕೆಳಗಿನ ವಿಚಾರಗಳನ್ನು ಮುಂದಿಟ್ಟಿದ್ದಾರೆ.ಇವುಗಳ ಬಗ್ಗೆ ಗಮನಹರಿಸಬೇಕಗಿ ವಿನಂತಿ.

Ø ಸಾವಯವ ಕೃಷಿಗೆ ಪೂರ್ಣ ಸವಲತ್ತು ಬೇಕು. ರಾಸಾಯನಿಕ ಕೃಷಿಯನ್ನು ನಿರ್ಲಕ್ಷಿಸಬೇಕು. ಕೃಷಿಕನೆಂದರೆ ಕೊಟ್ಟಿಗೆ ಇರಲೇಬೇಕು. ಎಂಬ ನಿಯಮ ಜಾರಿಗೆ ಬರಬೇಕು.ಇದಕ್ಕಾಗಿ ವಿಶೇಷ ಸವಲತ್ತು ಬೇಕು - ಶ್ರೀಕಾಂತ ಹೆಗ್ಡೆ , ಬೆಂಗಳೂರು
Ø ಸುಸ್ಥಿರ ಕೃಷಿಗೆ ಪ್ರೋತ್ಸಾಹ ಕೊಡಬೇಕು. ಈ ಮುಂದಾಲೋಚನೆ ಇಲ್ಲದಿದ್ದರೆ ಕೃಷಿಗೆ ಎಷ್ಟು ಸಹಾಯ ಮಾಡಿದರೂ ಅದು ಬಂಡೆ ಮೇಲೆ ನೀರೆರೆದಂತೆಯೇ ಸರಿ. – ಮಹೇಶ್ ಪ್ರಸಾದ್ ನೀರ್ಕಜೆ , ಬೆಂಗಳೂರು
Ø ಎಲ್ಲಾ ಕೃಷಿಕರಿಗೆ ಹಾಗೂ ಕೃಷಿಕಾರ್ಮಿಕರಿಗೆ ‘ಜೀವವಿಮೆ’ ಮತ್ತು ‘ಆರೋಗ್ಯವಿಮೆ’ ಸೌಲಭ್ಯ ಸರಕಾರ ಕಲ್ಪಿಸಿಕೊಡಬೇಕು.(ವಿಮಾ ಪ್ರೀಮಿಯಂ ಸರಕಾರ ತುಂಬ ಬೇಕು).ಈಗ ಸಹಕಾರೀ ಸಂಘದ ಸದಸ್ಯರಿಗೆ ‘ಯಶಸ್ವಿನಿ’ ವಿಮಾಯೋಜನೆಯಿದೆ, ಪ್ರೀಮಿಯಂ ನಾವೇ ಕಟ್ಟಬೇಕು. - ಶಂಕರ ಭಟ್ ಬಾಲ್ಯ , ಉಪ್ಪಿನಂಗಡಿ , ಪುತ್ತೂರು
Ø ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಬೇಕು, ಸಾಲಮನ್ನಾ, ಸಬ್ಸೀಡಿ ಬದಲು ವೈಜ್ಞಾನಿಕ ಬೆಲೆ ನಿಗದಿಯಾಗಬೇಕು.- ಕೇಶವಪ್ರಸಾದ್ ನಾಣಿಹಿತ್ಲು, ಕುಂಬಳೆ
Ø ಕೃಷಿ ಯಂತ್ರೋಪಕರಣಗಳಿಗೆ ಲಭ್ಯವಾಗುವ ಸಹಾಯಧನ ನೇರವಾಗಿ ಕೃಷಿಕನ ಖಾತೆಗೇ ಅರ್ಧದಷ್ಟು ಬರಬೇಕು , ಇದರಲ್ಲಿ  ಮೋಸವಾಗದಂತೆ ತಡೆಗಟ್ಟಲು ಪರಿಣಾಮಕಾರಿ ವ್ಯವಸ್ಥೆ ಜಾರಿಯಾಗಬೇಕು – ಮಹೇಶ್ ಪುಚ್ಚಪ್ಪಾಡಿ, ಗುತ್ತಿಗಾರು, ಸುಳ್ಯ
Ø ರೈತರು ಸ್ವಂತ ಶಕ್ತಿಯಿಂದ ನಿಲ್ಲಲು ಸೂಕ್ತ ವ್ಯವಸ್ಥೆಯಾಗಬೇಕು- ಸತೀಶ್ ವಾಗ್ಲೆ , ಪುತ್ತೂರು

Ø ರೈತರಿಗೆ ಬದುಕಿಗೆ ಸರಿಯಾದ ಭದ್ರತೆ ಬೇಕು - ಶ್ರೀಪಾದ ರಾವ್, ಹೊಸನಗರ, ಶಿವಮೊಗ್ಗ
Ø ಅಡಿಕೆಯ ಹಳದಿ ರೋಗಕ್ಕೆ ಇಷ್ಟರತನಕ ಸರಕಾರಗಳು ನೆಪಮಾತ್ರದ ಸಹಾಯ ಮಾಡಿದೆ. ಗಂಭೀರ ಸಂಶೋಧನೆಗೆ ವಿಜ್ಞಾನಿಗಳಿಗೆ ಬೇಕಾದಷ್ಟು ಹಣ ಬಿಡುಗಡೆ ಮಾಡಬೇಕು.ಅದರೊಂದಿಗೆ ಈಗ ಈ ರೋಗದಿಂದ ಬಸವಳಿದು ಅಡಿಕೆ ಕೃಷಿಯಿಂದ ಬೇರೆ ಕೃಷಿಗೆ ಬದಲಾಯಿಸುವವರಿಗೆ ಸಹಾಯಧನ ಒದಗಿಸಲಿ. – ರಮೇಶ್ ದೇಲಂಪಾಡಿ , ಮರ್ಕಂಜ , ಸುಳ್ಯ
Ø ಕೃಷಿಕರಿಗೆ ಹೆಚ್ಚಿನ ಸಹಕಾರ ಹಾಗೂ ಸಹಾಯಹಸ್ತವನ್ನು ನೀಡಬೇಕು.- ರಮೇಶ್ ಭಟ್, ಪುತ್ತೂರು
Ø ಇಡೀ ದೇಶದಲ್ಲಿ ಕೃಷಿ ಬೆಳವಣಿಗೆ ವಾರ್ಷಿಕವಾಗಿ ಶೇ.೨ . ಆದರೆ ಇಂದು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ರೈತರ ಸಾಲಕ್ಕೆ ಶೇ.೯ ರ ಮೇಲೆ ಬಡ್ಡಿ ಇದೆ.ಹೀಗಾಗಿ ಇದು ಕೃಷಿ ಬೆಳವಣಿಗೆ ವಾರ್ಷಿಕವಾಗಿ ಶೇ.೨ ರಿಂದ ಕಡಿಮೆ ಬಡ್ಡಿಗೆ ರೈತರಿಗೆ ಎಲ್ಲಾ ಬ್ಯಾಂಕ್ ಗಳಲ್ಲಿ ಸಾಲ ಸಿಗಬೇಕು. – ಗುಣಶೇಖರ ಭಟ್ , ಕರಿಕ್ಕಳ , ಪಂಜ
Ø ಕೃಷಿ ಯಂತ್ರೋಪಕರಣಗಳಿಗೆ ಸಬ್ಸೀಡಿ ರೈತರ ಹೆಸರಿಗೆ ತಕ್ಷಣವೇ ಸಿಗುವಂತಾಗಲಿ , ಸಬ್ಸಿಡಿಗಾಗಿ ಬೆಲೆಹೆಚ್ಚಿಸುವ ತಂತ್ರಗಾರಿಕೆ ಬಳಸದೆ, ಇದರ ಪ್ರಯೋಜನ ಪಡೆಯಲು ರೋಸಿಹೊಗುವಷ್ಟು ಕಡತಗಳ ತಯಾರಿ ಮತ್ತು ಅಲೆದಾಟ ಕದಿಮೆಯಾಗುವಂತಹ ವ್ಯವಸ್ಥೆ ಮತ್ತು ಉತ್ತಮ ಗುಣಮಟ್ಟದ ವಸ್ತುಗಳು ಸಿಗುವಂತಾಗಲಿ. – ಕುಮಾರ ಸುಬ್ರಹ್ಮಣ್ಯ ಮುಳಿಯಾಲ , ಪುತ್ತೂರು
Ø ಕೃಷಿಗೆ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ.- ಶ್ಯಾಂಪ್ರಸಾದ್, ಪುತ್ತೂರು
Ø ಯಾವ ಕಾಲಕ್ಕೂ ಹೈನುಗಾರಿಕೆ ಮತ್ತು ಕೃಷಿ ಪರಸ್ಪರ ಅವಲಂಬಿ ಕ್ಷೇತ್ರಗಳು.ಆದರೆ ಈಗ ಹೈನು‌ಉತ್ಪನ್ನ ಮಾರುಕಟ್ಟೆಯನ್ನ ಸರಕಾರ ನಿಯಂತ್ರಿಸುತ್ತಿರುವ ಕಾರಣ, ಹೈನುಗಾರಿಕೆ ಕೃಷಿಕರಿಗೆ ಲಾಭರಹಿತ ಕ್ಷೇತ್ರವಾಗಿದೇ.ಇದರಿಂದಾಗಿ ಹೆಚ್ಚಿನ ಕೃಷಿಕರು ಸ್ವಂತ ಉಪಯೋಗದ ಹಾಲು ಇತ್ಯಾದಿಗಳನ್ನ ಡೈರಿಯಿಂದ ಕೊಳ್ಳುತ್ತಿದ್ದಾರೆ. ಹಾಗು ತನ್ನ ಕೃಷಿಗೆ ಬೇಕಾದ ಗೊಬ್ಬರಕ್ಕೆ ಸರಕಾರವನ್ನ ಅವಲಂಬಿಸಿದ್ದಾನೆ. ಸರಕಾರ ಇತ್ತ ಗಮನಹರಿಸಿ ಹೈನು‌ಉತ್ಪನ್ನ ಬೆಲೆ ನಿಯಂತ್ರಣ ರೈತರ ಕೈಗೆ ಕೊಡಲಿ ಮತ್ತು ರಸಗೊಬ್ಬರ ಗಲಾಟೆಯಿಂದ ತಾನು ಮುಕ್ತಗೊಳ್ಳಲಿ. – ಮಹೇಶಕೃಷ್ಣ ಮುಳಿಯಾಲ , ಬೆಂಗಳೂರು
Ø ಜಲಸಂರಕ್ಷಣೆ , ಮಣ್ಣಿನ ಸವಕಳಿ ಮೊದಲಾದವುಗಳ ರಕ್ಷಣೆಗೆ ಸರಕಾರ ಸಹಾಯಧನ, ನೀಡಲಿ.- ಶ್ಯಾಂ ಭಟ್ ಗೊರಗೋಡಿ, ಗುತ್ತಿಗಾರು, ಸುಳ್ಯ
Ø ತೋಟಗಾರಿಕೆ, ಕೃಷಿ ಇಲಾಖೆಯು ರೈತ ಸ್ನೇಹಿಯಾಗಿರಲು , ಮಾಹಿತಿ ನೀಡುವ ಬಗ್ಗೆ ಕಾಯಕಲ್ಪವಾಗಬೇಕು, ಕೃಷಿಕರ ಬಳಿಗೆ ಬಂದು ಇಲಾಖಾ ಅಧಿಕಾರಿಳು ಚರ್ಚಿಸಲಿ  - ಕುಮಾರ ಸುಬ್ರಹ್ಮಣ್ಯ ಮುಳಿಯಾಲ , ಪುತ್ತೂರು
Ø ಕೃಷಿಕರಿಗೆ ಇಂದು ಕಾಡುತ್ತಿರುವ ಕೂಲಿ ಕಾರ್ಮಿಕರ, ಕುಶಲ ಕಾರ್ಮಿಕರ ಸಮಸ್ಯೆಗಳ ನಿವಾರಣೆ ಬಗ್ಗೆ ಚಿಂತನೆ.- ಶ್ಯಾಂಪ್ರಸಾದ್ , ಪುತ್ತೂರು

Ø ಐ‌ಐಟಿ ಅಥವಾ ಆರ್‌ಇಸಿ ಮಟ್ಟದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೃಷಿಯಂತ್ರೋಪಕರಣ ವಿಭಾಗದಲ್ಲಿ ಎಂಟೆಕ್ ಕೋರ್ಸ್ ಆರಂಭಿಸಿ, ಈ ವಿಭಾಗಕ್ಕೆ ಟಾರ್ಗೆಟ್ ಕೊಟ್ಟು , ಸರಕಾರದಿಂದ ಅನುದಾನ ನೀಡಿ ಯಂತ್ರೋಪಕರಣಗಳ ಅಭಿವೃದ್ಧಿಗೆ ಆದ್ಯತೆ.ಮುಂದುವರಿದ ದೇಶಗಳಲ್ಲಿ ಈ ಪ್ರಯತ್ನ ನಡೆಯುತ್ತಲೇ ಇದೆ.ಇದರಿಂದ ಕೃಷಿ ಅಭಿವೃದ್ಧಿಗೆ ಯಂತ್ರಗಳ ಲಭ್ಯತೆ ಹೆಚ್ಚಾಗಬಹುದು, ಕೃಷಿ ಬೆಳವಣಿಗೆಗೆ ಸಹಾಯವಾಗಬಹುದು. – ಮಹೇಶ್ ಕೃಷ್ಣ ಮುಳಿಯಾಲ, ಬೆಂಗಳೂರು
Ø ಶಾಲೆಗಳಲ್ಲಿ ಕೃಷಿ ವಿಚಾರಗಳಿಗೆ ಆದ್ಯತೆ ನೀಡುವ ಕಾರ್ಯಕ್ರಮ, ಈ ಮೂಲಕ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಬೆಳೆಸುವ ಪ್ರಯತ್ನ ನಡೆಯಬೇಕು.-ಗೋವಿಂದ ಪ್ರಸಾದ್ , ಬೆಂಗಳೂರು
Ø ಕೃಷಿ ಉತ್ಪನ್ನಗಳ ಬೆಲೆ, ಸ್ಥೀರೀಕರಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ  ಅಗತ್ಯ ಕ್ರಮ - ಶಂಕರನಾರಾಯಣ ಭಟ್ , ಕನ್ಯಾನ, ವಿಟ್ಲ
Ø ಸಹಕಾರಿ ಸಂಘ ಸಂಸ್ಥೆಗಳ ಮೂಲಕ ಕೃಷಿ ಉತ್ನನ್ನ ಮಾರಾಟ ಮಾಡುವ ರೈತರಿಗೆ ಸರಕಾರದಿಂದ ಕನಿಷ್ಟ ೨ ರೂಪಾಯಿ ಪ್ರೋತ್ಸಾಹ ಧನ. ಹಾಗೂ ವಿವಿಧ ಸೌಲಭ್ಯ ಒದಗಿಸಬೇಕು. ಇದರಿಂದಾಗಿ ಹೆಚ್ಚಿನ ಪಾಲು ಕೃಷಿ ಉತ್ಪನ್ನಗಳ ಸಹಕಾರಿ ಸಂಸ್ಥೆಗಳಿಗೆ ಬಂದರೆ,  ಕೃಷಿ ಮಾರುಕಟ್ಟೆಯನ್ನು ಸಹಕಾರ ಸಂಘಗಳಿಗೆ ನಿಯಂತ್ರಿಸಲು ಪ್ರಯತ್ನಿಸಬಹುದು. – ಮಹೇಶ್ ಪುಚ್ಚಪ್ಪಾಡಿ, ಗುತ್ತಿಗಾರು, ಸುಳ್ಯ
Ø ಕೆರೆಗಳ ಹೂಳೆತ್ತುವಿಕೆಗೆ ಶೇಕಡಾ ೫೦ ಸಹಾಯಧ ರೈತರ ಸ್ವಂತ ಜಮೀನಿಗೆ ಸರಕಾರ ನೀಡಬೇಕು. ಇದರಿಂದಾಗಿ   ಅಂತರ್ಜಲ ಬಳಕೆ ಕಡಿಮೆಯಾಗಬಹುದು – ಎಲ್.ಬಿ.ಪೆರ್ನಾಜೆ, ಪುತ್ತೂರು.
Ø ಕೊಳೆರೋಗದಿಂದ ಬೆಳೆ ಹಾನಿಯಾದ ರೈತರ ನಷ್ಟ ತುಂಬಿಸುವ ಕಾರ್ಯಕ್ಕೆ ಸರಕಾರ ಆದ್ಯತೆ ನೀಡಬೇಕು - ಎಲ್.ಬಿ.ಪೆರ್ನಾಜೆ, ಪುತ್ತೂರು.
Ø ಕೃಷಿಗೆ ಸಂಬಂಧಿಸಿದ ಸಹಾಯಧನ / ಸವಲತ್ತು ಪಡೆಯಲು ಇರುವ ಭೂ ಮಿತಿಯನ್ನು ರದ್ದು ಪಡಿಸಿ ಸವಲತ್ತು ಎಲ್ಲಾ ರೈತರಿಗೆ ಅವರವರ ಹಿಡುವಳಿಯ ಮಿತಿಗೆ ಅನುಸಾರವಾಗಿ ಒದಗಿಸಬೇಕು. ಸಮಸ್ಯೆ ಎಲ್ಲಾ ರೈತರಿಗೂ ಇದೆ ಎಂಬುದನ್ನು ಸರಕಾರ ಮನಗಾಣ ಬೇಕು- ಎಲ್.ಬಿ.ಪೆರ್ನಾಜೆ, ಪುತ್ತೂರು.
Ø ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಅಭಿವೃದ್ದಿ ಕಾರ್ಯಗಳಿಗೆ (ರಸ್ತೆ/ಮೇಲ್ಸೇತುವೆ/ಕೈಗಾರಿಕೆ) ಬಳಸದಂತೆ ಕಾನೂನು ಅಗತ್ಯ. – ರವೀಶ್ ನಿಡುಗಳ , ಬೆಂಗಳೂರು
Ø ಆಹಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ಅಗತ್ಯ. ಈ ನಿಟ್ಟಿನಲ್ಲಿ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕು , ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಶಾಲೆಗಳಲ್ಲೂ ಕಾರ್ಯಕ್ರಮ ರೂಪಿಸಬೇಕು – ಗೋವಿಂದ ಪ್ರಸಾದ್, ಬೆಂಗಳೂರು
Ø ವನಸಂರಕ್ಷಣೆ, ಅರಣ್ಯ ಅಭಿವೃದ್ಧಿ ಬಗ್ಗೆ ಸರಕಾರವು ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಬೇಕು – ಗೋವಿಂದ ಪ್ರಸಾದ್, ಬೆಂಗಳೂರು

Ø ಶಾಲಾ ಪಠ್ಯಕ್ರಮದಲ್ಲಿ  ರಾಜಕೀಯ, ಸಾಮಾಜಿಕ , ಇತ್ಯಾದಿಗಳ ವಿಚಾರಗಳನ್ನು ತುಂಬುವಂತೆಯೇ ಕೃಷಿ , ಪರಿಸರದ ಬಗ್ಗೆಯೂ ಕಾರ್ಯಕ್ರಮ ಸಜಾರಿಯಾಗುವಂತೆ ಬಜೆಟ್‌ನಲ್ಲಿ ಯೋಜನೆ ರೂಪಿಸಬೇಕು- ಗೋವಿಂದ ಪ್ರಸಾದ್, ಬೆಂಗಳೂರು


ಈ ಸಂಗತಿಗಳ ಬಗ್ಗೆ ತಾವುಗಳು ಗಮನಹರಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.

                                      ಈ ಬಗ್ಗೆ ಸಂಪರ್ಕಕ್ಕಾಗಿ :

                                 ಮಹೇಶ್ ಪುಚ್ಚಪ್ಪಾಡಿ
                                       ಕಮಿಲ ಅಂಚೆ
                                       ಗುತ್ತಿಗಾರು ಗ್ರಾಮ
                                       ಸುಳ್ಯ ತಾಲೂಕು
                                       ದಕ್ಷಿಣ ಕನ್ನಡ – ೫೭೪೨೧೮

    ಸ್ಥಳ:                                     ಇತೀ ತಮ್ಮ ವಿಶ್ವಾಸಿಗಳು,
ದಿನಾಂಕ :
                                                    (ಮಹೇಶ್ ಪುಚ್ಚಪ್ಪಾಡಿ)
                                                     (ಗುಂಪಿನ ಪರವಾಗಿ)

ಕೃಷಿ ಸಂವಾದ ಗುಂಪಿನ ಬಗ್ಗೆ ಮಾಹಿತಿ :

ಕೃಷಿ ವಿಚಾರಗಳ ಬಗ್ಗೆ ಸಂವಾದ, ಮಾಹಿತಿ , ಅನುಭವಗಳನ್ನು ಹಂಚಿಕೊಳ್ಳುವ ಹಾಗೂ ಕೃಷಿ ಆಸಕ್ತರನ್ನು ಒಂದೆಡೆ ಸೇರಿಸುವ ಮತ್ತು ಆಸಕ್ತಿ ಬೆಳೆಸುವ ಉದ್ದೇಶದಿಂದ ಕಳೆದ ೨೦೧೧ ಅಕ್ಟೋಬರ್‌ನಲ್ಲಿ ಈ ಗುಂಪು ರಚನೆಯಾಗಿದೆ.ಸದ್ಯ ಈ ಗುಂಪಿನಲ್ಲಿ ೮೩೩ ಮಂದಿ ಇದ್ದಾರೆ.

 ಇಲ್ಲಿ ಕೃಷಿ ವಿಚಾರವಾಗಿ ಅನೇಕ ಚರ್ಚೆಗಳು, ಮಾಹಿತಿಗಳು, ಸಂವಾದಗಳು ನಡೆದಿದೆ.ಈಗ  ರಾಜ್ಯ ಬಜೆಟ್ ಹತ್ತಿರವಾಗುತ್ತಿರುವುದರಿಂದ ಕೃಷಿಗೆ ಸಂಬಂಧಿಸಿದಂತೆ ಕೃಷಿಕರ ಅನೇಕ ಬೇಡಿಕೆಗಳಿವೆ. ಅವುಗಳಲ್ಲಿ  ಕೃಷಿ ಗುಂಪಿನಲ್ಲಿ ಬಂದ ಸಲಹೆಗಳು ಈ ಮೇಲಿನಂತೆ ಇವೆ. ಬಜೆಟ್ ತಯಾರಿಸುವ ಸಂದರ್ಭದಲ್ಲಿ  ಇಲ್ಲಿ ನೀಡಿದ ಮನವಿಯ ಕಡೆಗೂ ಆದ್ಯತೆ ನೀಡಿ, ಸೂಕ್ತವಾದ ಕಾನೂನು ರಚಿಸಿ ಕೃಷಿಕರ ಕಡೆಗೆ ಹೆಚ್ಚಿನ ಲಕ್ಷ್ಯ್ಯ ನೀಡಬೇಕಾಗಿ ನಮ್ಮ ಕೋರಿಕೆ.