Thursday 26 January 2012

ಹಾಲಿನ ಬೆಲೆ ಏರಿಕೆ ಅನಿವಾರ್ಯ


ಕರ್ನಾಟಕ ಸರಕಾರವು ನಂದಿನಿ ಹಾಲಿನ ಬೆಲೆಯನ್ನು ಮೀನ ಮೇಷ ಎಣಿಸುತ್ತ ಅಂತೂ ಒಂದಿಷ್ಟು ಏರಿಸಿದೆ. ಹೈನುಗಾರಿಕೆಯಲ್ಲಿ ತೀವ್ರ ನಷ್ಟ ಅನುಭವಿಸುತ್ತ ಹೈನುಗಾರ ಹೈರಾಣಾಗಿ ಹತಾಶೆಯ ಅಂಚಿಗೆ ಬಂದ ಹೊತ್ತಿನಲ್ಲಿ ಸರಕಾರದ ಈ ಗೊಂದಲ ಹೈನುಗಾರನನ್ನು ಇನ್ನಷ್ಟು ಕಂಗೆಡಿಸಿದ್ದಂತೂ ಸತ್ಯ. ಹಾಲಿನ ಬೆಲೆ ಏರಿಕೆ ಬೇಕೇ ? ಎನ್ನುವ ಬಗ್ಗೆ ತುಂಬ ಚಿಂತನ ಮಂಥನ ಬೇಕಾಗಿಲ್ಲ. ಏರಿಸಬೇಕಾದ ಬೆಲೆ ಎಷ್ಟು ಎನ್ನುವ ಬಗ್ಗೆ ಎಷ್ಟು ಬೇಗ ನಿರ್ಧಾರ ಬೇಗೆ ತೆಗೆದುಕೊಂಡಿದ್ದರೆ ಉತ್ತಮವಿತ್ತು. ಅಂತೂ ಯಾವತ್ತೋ ತೆಗೆದುಕೊಳ್ಳಬೇಕಾಗಿದ್ದ ಅನಿವಾರ್ಯ ನಿರ್ಧಾರಕ್ಕೆ ಸರಕಾರ ಬಂತಲ್ಲ, ಅದೊಂದು ಸಮಧಾನ. 

ಹಾಲನ್ನು ಜೀವ ಸಂಜೀವಿನಿ ಅನ್ನುವುದುಂಟು. ದೇಹದ ಬೆಳವಣಿಗೆಗೆ ಯಾವೆಲ್ಲ ಪೋಷಕಾಂಶಗಳು ಬೇಕೋ ಅವೆಲ್ಲವೂ ಸಮಪ್ರಮಾಣದಲ್ಲಿ ಹಾಲಿನಲ್ಲಿದೆ. ನಮ್ಮ ಮೂಳೆಗಳು, ದವಡೆಗಳು ಸದೃಢವಾಗಿರಬೇಕಾದರೆ ಕ್ಯಾಲ್ಸಿಯಮ್ ಬೇಕು. ಅದು ಯಥೇಷ್ಟ ದೊರೆಯುತ್ತದೆ ಹಾಲಿನಲ್ಲಿ. ಅಬಾಲರಿಂದ ತೊಡಗಿ ವೃದ್ಧರ ತನಕ ಸಮಾಜದ ಎಲ್ಲ ಸ್ತರದವರಿಗೂ ಹಾಲು ಮತ್ತು ಹಾಲಿನ ಉಪೋತ್ಪನ್ನಗಳು ಬೇಕೇ ಬೇಕು ಜೀವ ರಥ ಮುನ್ನಡೆಯಲು - ವಾಹನಗಳಿಗೆ ಪೆಟ್ರೋಲ್ ಅಥವಾ ಡಿಸೆಲ್ ಹಾಕುವಂತೆ. ಇಂಥ ಅಮೂಲ್ಯ ಸಂಜೀವಿನಿಯನ್ನು ಒದಗಿಸುವ ಹೈನುಗಾರರನ್ನು ಸಮಾಜ ಎಂದೂ ಮರೆಯಬಾರದು. 

ಯಂತ್ರವೊಂದು ಹಾಲನ್ನು ನೀಡದು ಎನ್ನುವ ಸತ್ಯ ಎಲ್ಲರಿಗೂ ತಿಳಿದದ್ದೇ. ಬಣ್ಣದ ಪಕೇಟಿನಲ್ಲಿ ಅಥವಾ ಬಾಟಲಿಯಲ್ಲಿ ಸಿಂಗರಿಸಿಕೊಂಡು ಮನೆ ಮನೆಗೆ ಬೆಳ್ಳಂಬೆಳಗ್ಗೆ ತಲುಪುವ ಹಾಲು ಉತ್ಪಾದನೆಯಾಗುವುದು ಹಳ್ಳಿ ಮೂಲೆಯ ಹಟ್ಟಿಗಳಲ್ಲಿ. ಅಲ್ಲಿ ನಾಲ್ಕಾರು ಹಸುಗಳು. ಅವುಗಳಿಗೆಲ್ಲ ಹೊತ್ತು ಹೊತ್ತಿಗೆ ಹಿಂಡಿ, ನೀರು, ಮೇವು ನೀಡಿ ಜತನದಿಂದ ಸಲಹಬೇಕು. ಹುಟ್ಟಿದ ಕರು ಹುಳ ಬಾಧೆಗಳಿಂದೆಲ್ಲ ಮೀರಿ ನಿಧಾನವಾಗಿ ಬೆಳೆಯುತ್ತ ಗಡಸಾಗಿ, ಮುಂದೆ ದನವಾಗಿ, ಗರ್ಭ ಧರಿಸಿ ಕರು ಹಾಕಿ ಹಾಲು ನೀಡುವ ಹಂತಕ್ಕೆ ಬರಬೇಕಾದರೆ ಅದರ ಹಿಂದೆ ಹೈನುಗಾರನ ಅತೀವ ಸಹನೆ ಇದೆ; ಶ್ರಮವಿದೆ. ಅದಕ್ಕೆ ನೀಡಬೇಕಾದ ಬೆಲೆಯ ಬಗ್ಗೆ ಚೌಕಾಸಿ ಸಲ್ಲದು. ಉಡಾಫೆ ಕೂಡದು. 

ಹಾಲು ಸಂಗ್ರಹಣೆ ಮತ್ತು ವಿತರಣೆ ಮಾಡುವ ಸರಕಾರ ಕೃಪಾಪೋಷಿತ ಕೆಎಮ್‌ಎಫ್ ಸಂಸ್ಥೆಯಲ್ಲಿ ದಿನಕ್ಕೆ ಸುಮಾರು ನಲುವತ್ತುಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆಯಂತೆ. ಇವೆಲ್ಲವೂ ಸಂಗ್ರಹವಾಗುವುದು ಹಳ್ಳಿಗಳಲ್ಲಿ - ಕೆಲವು ದನ, ಎಮ್ಮೆಗಳನ್ನು ಕಟ್ಟಿಕೊಂಡು ಕೃಷಿಕಾಯದಲ್ಲಿ ನಿರತ ರೈತಾಪಿ ಜನರಿಂದ. ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವಂತೆ ಸಾವಿರಾರು ಹಸುಗಳನ್ನು ಸಾಕುವ ಬೃಹತ್ ಡೈರಿ ಉದ್ದಿಮೆಗಳು ಇಲ್ಲಿ ಬೆರಳೆಣಿಕೆಯಲ್ಲಿ. ಹೆಚ್ಚಿನವೆಲ್ಲವೂ ಕಿರು ಡೈರಿಗಳು. ದಿನಕ್ಕೆ ಹತ್ತಿಪ್ಪತ್ತು ಲೀಟರ್ ಹಾಲು ಸಂಗ್ರಹವಾದರೆ ಅದೇ ದೊಡ್ಡ ಸಂಗತಿ. ಆದರೆ ಗಮನಿಸಬೇಕಾದದ್ದು - ಇಂಥ ಸಾಂಘಿಕ ಪ್ರಯತ್ನದಿಂದ ಲಕ್ಷ ಲೀಟರ್ ಹಾಲು ಒಟ್ಟಾಗುತ್ತಿದೆ ಎನ್ನುವುದೊಂದು ಅದ್ಭುತ. ನಿಜಕ್ಕೂ ಇದು ಹನಿ ಕೂಡಿ ಹಳ್ಳ. ಹಳ್ಳಿಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೂರದೂರದಿಂದ ನಡೆದು, ಸೈಕಲ್ ಏರಿ, ಹಾಲಿನ ಸೊಸೈಟಿಗೆ ಬಂದು ಹಾಲು ಹಾಕಿ ಹೋಗುವ ಮಂದಿಗಳು ಇನ್ನೂ ಉಳಿದಿದ್ದಾರೆ ಮತ್ತು ಆ ಮೂಲಕ ಪೆಕೇಟಿನಲ್ಲಿ ಹಾಲು ಬರಲು ಕಾರಣರಾಗಿದ್ದಾರೆ. 

ನಮಗೆ ಹೇಗೆ ಬಗೆ ಬಗೆಯ ಆಹಾರಗಳು ಬೇಕೋ, ಅದೇ ಬಗೆಯಲ್ಲಿ ಹಸುಗಳಿಗೂ ಕೂಡ - ರಾಗಿ, ಜೋಳ, ಗೋದಿ, ಉದ್ದು, ಅಕ್ಕಿ, ತೌಡು ಬೂಸಗಳನ್ನು ಮಿಶ್ರಮಾಡಿ ನೀಡಬೇಕಾಗುತ್ತದೆ. ಇದರೊಂದಿಗೆ ಹಾಲಿನಲ್ಲಿ ಕೊಬ್ಬಿನ ಅಂಶವಿರಬೇಕಾದರೆ ನೆಲಗಡಲೆ ಮತ್ತು ಎಳ್ಳಿನ ಹಿಂಡಿಯನ್ನು ಸಾಕಷ್ಟು ಪ್ರಮಾಣದಲ್ಲಿ ಬೆರೆಸಬೇಕು. ಹಾಲು ನೀಡಿದಂತೆ ಹಸುವಿನ ಕಸುವು ಕುಗ್ಗುತ್ತದೆ; ದೇಹದಲ್ಲಿ ಕ್ಯಾಲ್ಸಿಯಮ್ ಮತ್ತು ಇತರ ಪೋಷಕಾಂಶಗಳು ಕಡಿಮೆಯಾಗುತ್ತದೆ. ಹಾಗಾಗಿ ಲವಣಾಂಶವನ್ನು ಕೂಡ ನೀಡಬೇಕಾಗುತ್ತದೆ. 
ವರ್ಷದ ಹಿಂದೆ ಐವತ್ತು ಕೆಜಿ ಬೂಸಾ ಗೋಣಿಗೆ ಸುಮಾರು ಆರುನೂರು ರೂಪಾಯಿಗಳಷ್ಟಿತ್ತು. ಇಂದು ಆರೂನೂರೈವತ್ತರ ಗಡಿ ದಾಟಿ ಮತ್ತೂ ಮುನ್ನುಗ್ಗುತ್ತಿದೆ. ಮಾನ್ಯ ಚಿದಂಬರಂ ಪೆಟ್ರೋಲ್ - ಡಿಸೆಲ್ ದರ ಏರಿಸದೇ ಏರಿಸುವ ಸಾಧ್ಯತೆ ಇದೆ ಎಂದರೂ ಸಾಕು - ಹಿಂಡಿಯ ಕ್ರಯ ಏರುತ್ತದೆ ಎನ್ನುವುದೇ ಒಂದು ಚಿದಂಬರ ರಹಸ್ಯ. ಎಷ್ಟು ಏರಿದರೇನು, ಹಸು ಸಾಕಬೇಕೆಂದರೆ ಹಿಂಡಿ ಕೊಳ್ಳುವುದು ಅನಿವಾರ್ಯವೆನ್ನುವುದು ಆ ಹಿಂಡಿಯ ಉತ್ಪಾದಕರಿಗೂ ಚೆನ್ನಾಗಿಯೇ ಅರಿವಿದೆ. 

ಹಿಂಡಿಯೊಂದಿಗೆ ಹಸುಗಳಿಗೆ ಹಸಿ ಮತ್ತು ಒಣ ಮೇವು ಬೇಕು. ಕರಾವಳಿಯ ನಮ್ಮ ಗದ್ದೆಗಳು ಅಡಿಕೆಯ ತೋಟಗಳಾಗಿವೆ, ಇಲ್ಲವೇ ಬಂಜರು ಬಿದ್ದಿವೆ. ಒಣ ಮೇವಿಗಾಗಿ ಘಟ್ಟ ಅಥವಾ ಬಯಲು ಸೀಮೆಯನ್ನು ಆಶ್ರಯಿಸಬೇಕಾಗಿದೆ. ಅಲ್ಲಾದರೂ ಅಷ್ಟೇ. ಭತ್ತ, ಜೋಳದ ಗದ್ದೆಗಳಲ್ಲಿ ಕಬ್ಬು, ಅಡಿಕೆ, ಅರಷಿಣ, ಶುಂಠಿ ಏಳುತ್ತಿವೆ. ಒಣ ಹುಲ್ಲು ಸಿಗುವುದು ದುರ್ಭರವಾಗಿ ಕ್ರಯ ಊಹಿಸಲಾಗದಷ್ಟು ಹೆಚ್ಚಿದೆ. ಹಿಡಿ ಗಾತ್ರದ ಬೈಹುಲ್ಲಿನ ಕಂತೆಗೆ ಇಂದು ಹದಿನೆಂಟು ರೂಪಾಯಿ. ಲಾರಿ ಲೋಡಿಗೆ ಬರೋಬ್ಬರಿ ಮೂವತ್ತೈದು ಸಾವಿರ ರೂಪಾಯಿ. ಒಂದು ಸಪುಷ್ಟ ದನಕ್ಕೆ ಕಡಿಮೆ ಎಂದರೂ ದಿನವೊಂದಕ್ಕೆ ಮೂರರಿಂದ ನಾಲ್ಕು ಕಂತೆ ಬೈಹುಲ್ಲು ಮತ್ತು ಸಾಕಷ್ಟು ಹಸಿ ಹುಲ್ಲು ಬೇಕಾಗುತ್ತದೆನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. 

ಹಸು ಹಾಲು ನೀಡುವ ಯಾಂತ್ರಿಕ ಯಂತ್ರವಲ್ಲ. ಕರು ಹಾಕಿದ ಮೊದಲ ಒಂದೆರಡು ತಿಂಗಳು ಅತ್ಯಧಿಕ ಪ್ರಮಾಣದಲ್ಲಿ ಹಾಲು ನೀಡಿ, ಮತ್ತಿನ ದಿನಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತ ಆರು ತಿಂಗಳಲ್ಲಿ ಅರ್ಧದಷ್ಟು ಕಡಿಮೆಯಾಗಿ, ಒಂಬತ್ತು ತಿಂಗಳಲ್ಲಿ ಸಂಪೂರ್ಣ ನಿಲ್ಲಿಸುವ ಹಂತಕ್ಕೆ ಬರುತ್ತದೆ. ಹಾಗಾಗಿಯೇ ಹಾಲಿನ ಪೂರೈಕೆ ನಿರಂತರ ಸಾಗುತ್ತಿರಬೇಕಾದರೆ, ಒಂದೆರಡಲ್ಲ - ಕೆಲವು ಹಸುಗಳಾದರೂ ಇರಬೇಕಾಗುತ್ತದೆ. ಅಂದರೆ ಹೈನುಗಾರಿಕೆಯಲ್ಲಿ ಹಾಲು ಕೊಡದ ಹಸುಗಳನ್ನು ಸಾಕಿ ಸಂಭಾಳಿಸುವ ಆರ್ಥಿಕ ಜವಾಬ್ದಾರಿ ಕೂಡ ಹೈನುಗಾರನ ಮೇಲಿರುತ್ತದೆ. ಇದರೊಂದಿಗೆ ಆಗಾಗ ಕಾಡುವ ಕೆಚ್ಚಲು ಬೇನೆ, ಜ್ವರ ಇತ್ಯಾದಿ ಶೂಷ್ರೂಷೆಯ ಪಾಲು ಹೇರಳವಾಗಿ ಇರುತ್ತದೆ. 
ಹತ್ತಿಪ್ಪತ್ತು ಬಿಡಿ, ಒಂದೆರಡು ಹಾಲು ಕರೆಯುವ ಹಸುಗಳಿದ್ದರೂ ಸರಿ - ಮನೆ ಮಂದಿಗೆ ಬೇರೆ ಬಂದೀಖಾನೆ ಬೇಕಿಲ್ಲ. ಕೃಷಿಯ ಬೇರೆ ಕೆಲಸಗಳನ್ನು ಒಂದೆರಡು ದಿನಗಳಿಗೆ ಮುಂದೂಡಬಹುದು. ಆದರೆ ಹಾಲು ಹಿಂಡುವ ಕೆಲಸ ಮಾತ್ರ ಆ ಹೊತ್ತಿನದ್ದು ಆಗಲೇ ಬೇಕು. ಇಂದು ಬೇಡ, ನಾಳೆಗೆಂದು ಮುಂದೂಡಿದರೆ ಕೆಚ್ಚಲಲ್ಲಿ ಹಾಲು ಉಳಿದು ಗಟ್ಟಿಕಟ್ಟಿದರೆ ಕಥೆ ಗೋವಿಂದ! 

ಅಂದರೆ ಹಸುಗಳ ಲಾಲನೆ ಪಾಲನೆಗೆ ಜನಬಲವೂ ಬೇಕು. ಜನರ ತೀವ್ರ ಕೊರತೆ ಒಂದೆಡೆಯಾದರೆ ಅದಕ್ಕೆ ಅನುಗುಣವಾಗಿ ಕೂಲಿಯ ದರವೂ ಏರಿದೆ. ದಿನಕ್ಕೆ ನೂರೈವತ್ತರಿಂದ ಇನ್ನೂರು ರೂಪಾಯಿ ಕೊಟ್ಟರೂ ಹಟ್ಟಿಯ ಕೆಲಸವೆಂದರೆ ಜನ ಮಾರು ದೂರ ಹೋಗುವ ಕಾಲದಲ್ಲಿ ಡೈರಿ ಮುನ್ನಡೆಸುವುದು ಕಷ್ಟದ ಸಾಹಸವೇ. 
ಈ ಕಾರಣದಿಂದಲೇ ಇರಬೇಕು, ಹತ್ತಿಪ್ಪತ್ತು ಹಸುಗಳಿಂದ ಸಮೃದ್ಧವಾಗಿದ್ದ ಅವೆಷ್ಟೋ ಹಟ್ಟಿಗಳಿಂದು ಹಸುಗಳಿಲ್ಲದೇ ಭಣಗುಟ್ಟುತ್ತಿವೆ. ಸಬ್ಸಿಡಿಯ ಆಶೆಗೆ ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ, ಒಂದೆರಡು ವರ್ಷಗಳಲ್ಲಿ ತೆಪ್ಪಗೆ ಮುಚ್ಚಿ ಮಾನ ಉಳಿಸಿಕೊಂಡ ಹಲವರಿದ್ದಾರೆ. ಇನ್ನು ಹಲವು ದೊಡ್ಡ ಕೃಷಿಕರ ಮನೆಗಳಲ್ಲಿ ಇಂದು ಹಸುಗಳೇ ಇಲ್ಲ. ಕೃಷಿಗೆಂದು ಕೋಳಿ, ಕುರಿ, ಆಡು ಅಥವಾ ಹಂದಿಯ ಗೊಬ್ಬರವನ್ನು ಆಶ್ರಯಿಸುತ್ತಿದ್ದಾರೆ. ಪೇಟೆಯಿಂದ ಪೆಕೇಟು ಹಾಲು ಬರುತ್ತಿದೆ ಹಳ್ಳಿಯ ಮನೆಗಳಿಗೂ. ಹಸು ಸಾಕಣೆಯ ಕರಕರೆ ಇಲ್ಲದೇ ಅಷ್ಟರ ಮಟ್ಟಿಗೆ ನಾವು ಸ್ವತಂತ್ರರೆಂದು ಹೇಳಿಕೊಳ್ಳುವಾಗ ಆ ದನಿಯಲ್ಲಿ ಗಾಢ ನೋವು ಕಾಣಬಹುದು. 

ಸದ್ಯದ ಪರಿಸ್ಥಿತಿಯಲ್ಲಿ ಒಂದು ಲೀಟರ್ ಹಾಲಿಗೆ ಮೂವತ್ತರಿಂದ ಮೂವತ್ತೈದು ರೂಪಾಯಿ ಸಿಕ್ಕಿದರಷ್ಟೇ ಹೈನುಗಾರಿಕೆ ಎಂಬ ನಷ್ಟದ ವ್ಯವಹಾರದಿಂದ ಬಚಾವಾಗಬಹುದೆಂದು ಅನುಭವೀ ಹೈನುಗಾರರ ಅಭಿಮತ. ಆದರೂ ನಿತ್ಯದ ಬದುಕಿಗೆ ಬೇಕಾದ ಹಾಲಿಗಾಗಿ, ಅಡುಗೆಯ ಅನಿಲಕ್ಕಾಗಿ, ಇರುವ ಒಂದಿಷ್ಟು ಕೃಷಿಯ ಉಳಿವಿಗಾಗಿ ಹಸು ಸಾಕಣೆ ಅಗತ್ಯ ಎಂಬ ಸ್ವಾವಲಂಬೀ ಚಿಂತನೆಯಷ್ಟೇ ಇವರನ್ನು ಲಾಭದಾಯಕವಲ್ಲದ ಹೈನುಗಾರಿಕೆಯಲ್ಲಿ ಮುಂದುವರಿಸಲು ಪ್ರೇರಣೆ ಕೊಡುತ್ತಿದೆ. ಅದೆಷ್ಟು ದಿನ? 
ಸರಕಾರ ಒಂದು ಲೀಟರ್ ಹಾಲಿಗೆ ಹೆಚ್ಚಿsಸಲು ಆಲೋಚಿಸಿದ್ದು ಕೇವಲ ಒಂದೆರಡು ರೂಪಾಯಿಗಳಷ್ಟೇ. ಆ ಮೂಲಕ ಹೈನುಗಾರನಿಗೆ ಲೀಟರಿಗೆ ಇಪ್ಪತ್ತಮೂರು ರೂಪಾಯಿ ಸಿಗಲಿದೆ. ಇದು ಏನೇನೂ ಸಾಲದು. ಆದರೆ ಏನೂ ಇಲ್ಲವೆನ್ನುವ ಹತಾಶೆಯ ಹೊತ್ತಲ್ಲಿ ಇಷ್ಟಾದರೂ ಬಂದೀತೆನ್ನುವುದಷ್ಟೇ ಅವನಿಗೆ ಸಮಾಧಾನ. 
ಕೃಷಿಕರ ನೋವು ಅರ್ಥ ಮಾಡಿಕೊಂಡು ಸರಕಾರ ಹಾಲಿನ ಬೆಲೆ ಏರಿಸುವ ನಿರ್ಧಾರವನ್ನು ಮಾನವೀಯ ಸಮಾಜ ಹೆಚ್ಚು ಗಲಾಟೆ ಇಲ್ಲದೇ ಸ್ವಾಗತಿಸಲು ಸಿದ್ಧವಾಯಿತಲ್ಲ - ನೋವಿನಲ್ಲೂ ಬೆಳಕು ತರುವ ಅಂಶ.


- ರಾಧಾಕೃಷ್ಣ 

Wednesday 25 January 2012

ಶೇಕಡಾವಾರು. . .


‎20 % : 35 % : 25 % ಏನಿದು ?
 ·  ·  · 19 January at 07:41
  • You like this.
    • Dinesh Delampady ‎% andare prathi 100 ralli estu embudagiruttade
      19 January at 10:56 · 
    • Ap Subrahmanyam ನನ್ನಲ್ಲಿ ಸಾಮಾನ್ಯ ವರ್ಷಗಳಲ್ಲಿ ೧,೨ ಮತ್ತು ೩ ನೇ ಕೊಯ್ಲು ಅಡಿಕೆಯ ಪ್ರಮಾಣ, ವಾರ್ಷಿಕ ಉತ್ಪನ್ನದ ಜೊತೆ ಹೋಲಿಸಿ.
      19 January at 22:56 ·  ·  1
    • Ap Subrahmanyam ಆದರೆ ಈ ವರ್ಷ ಇದು ಸುಮಾರು ೧೦ :೫೦:೨೫ ಕ್ಕೆ ಬರುವ೦ತೆ ಕಾಣುತ್ತಿದೆ, ನನ್ನಲ್ಲಿ ಮಾತ್ರವಲ್ಲ, ನನ್ನ ಚಿಕ್ಕಪ್ಪನಲ್ಲೂ ಹೀಗೇ ಅನಭವ !
      19 January at 22:58 ·  ·  1
    • Ap Subrahmanyam ಅಡಿಕೆ ಅ೦ಗಳದಲ್ಲಿ ಹರಡಲು ಸಮಸ್ಯೆ ! ಹಗ್ಗ, ಸರಿಗೆ,, ಗಳಲ್ಲಿ ನೇತು ಹಾಕುವುದು ಏಕೈಕ ಪರಿಹಾರ.
      19 January at 23:06 ·  ·  1
    • Ap Subrahmanyam ವೈಪರೀತ್ಯವೇ ?
      19 January at 23:06 · 
    • Narayana Darbhe ಮಾಡಿನ ಮೇಲೆ ಗೊನೆಗಳನ್ನು ಇರಿಸಿದರೆ?
      Sunday at 00:36 ·  ·  1
    • Ramesh Bhat B Risky Job.......
      Sunday at 06:56 ·  ·  1
    • Ap Subrahmanyam ಇದೇ ಬಳಗದಲ್ಲಿ ಹಿ೦ದೆ ಪ್ರಸ್ತಾವಿಸಿದ ಹಗ್ಗ ಕಟ್ಟಿ ನೇತಾಡಿಸುವುದು, ಗೊನೆಗಳನ್ನು ಇಡಿಯಾಗಿ ಹರಡುವುದು ಇತ್ಯಾದಿ ಮಾಡುತ್ತಿದ್ದೇನೆ. ನನ್ನ ಆಲೋಚನೆ ಈ ವರ್ಷ ನನ್ನಲ್ಲಿ ಸಾಧಾರಣ ಅರ್ಧ ಭಾಗ ಫಸಲು ನಡು ಕೊಯ್ಲಿಗೇ ಬರಲು ಕಾರಣ ಹವಾಮಾನ / ಪರಿಸರ ವೈಪರೀತ್ಯ / ವೈಚಿತ್ರ ಏನಾದರೂ ಕಾರಣ ಇರಬಹುದೇ ಎ೦ಬುದು ?
      Sunday at 09:50 ·  ·  1
    • Ap Subrahmanyam ಮಾಡಿನ ಮೇಲಿರಿಸುವುದು, ಇಳಿಸುವುದು ಕಷ್ಟ, ಮತ್ತು ಸಮಸ್ಯೆಯೂ ಇವೆ
      Sunday at 10:15 · 
    • Ap Subrahmanyam ಪೂರಕ ಮಾಹಿತಿ : ಈ ಬಾರಿ ನನ್ನಲ್ಲೂ, ನನ್ನ ಚಿಕ್ಕಪ್ಪನಲ್ಲೂ ಮೊದಲ ಕೊಯ್ಲು ಸುಮಾರು ೧ ವಾರ ಮು೦ಚಿತವಾಗಿಯೂ, ಎರಡನೆಯದು ೧೦ ದಿನ ತಡವಾಗಿಯೂ ಆಗಿದೆ, ಆದಎ ಈ ಕಾರಣ ನಡುಕೊಯ್ಲ ಫಸಲನ್ನು ಇಷ್ಟು ಹಿಗ್ಗಿಸಲಾರದು ಎ೦ದು ಭಾವನೆ. ಏನ೦ತೀರಿ ?
      Sunday at 10:17 · 
    • Narayana Darbhe ನಮ್ಮಲ್ಲಿ ಹಾಗೂ ಬೇರೆ ಒಂದೆರಡು ಕಡೆಗಳಲ್ಲಿ ಇದೇ ರೀತಿಯ ಅನುಭವವಾಗಿದೆ.ಅಂದರೆ ಹೆಚ್ಚಿನಂಶ ಫಸಲು 2ನೇ ಕೊಯಿಲಿಗೆ ಬಂದಿದೆ. ಈ ವರೆಗೆ ಇಂತಹ ಅನುಭವವಾಗಿರಲಿಲ್ಲ.
      Monday at 19:55 ·  ·  1
    • Ramesh Delampady ಕೆಲವು ವರ್ಷ ಎರಡನೇ ಕೊಯಿಲು ದೊಡ್ಡದಾದರೆ ಕೆಲವು ವರ್ಷ ಮೂರನೇ ಕೊಯಿಲು.
      Yesterday at 18:15 ·  ·  1
    • Ramesh Delampady ಅಡಿಕೆ ಸುಲಿದ ಬಳಿಕ -ಉತ್ತಮ ಅಡಿಕೆ,ಕೋಕ,ಸಿಪ್ಪೆಗೋಟು,ಕರಿಗೋಟುಗಳಲ್ಲೂ ಇಂತಹುದೇ ಮಾಹಿತಿ ಇದೆಯಾ?
      12 hours ago · 
    • Ap Subrahmanyam ಹ ಹ ಹ !
      7 hours ago · 
    • Thirumaleshwara Bhat ಹೆಚ್ಚಾಗಿ ಕೊಳೆ ರೋಗ ಬಂದ ವರ್ಷ ಅಥವಾ ಹಸಿ ನಳ್ಳಿ ಉದುರಿದರೆ ಹೀಗಾಗುತ್ತದೆ . ಯಾವಾಗಲೂ ಮೊದಲ ಗೊನೆಗೆ ರೋಗ ಬರುವುದು .ಹಾಗಾಗಿ ಮೊದಲ ಕೊಯಿಲಿನಲ್ಲಿ ಅಡಿಕೆ ಕಡಿಮೆ .
      6 hours ago ·  ·  4