ಅಡಿಕೆ ಮಾರುಕಟ್ಟೆ ಈಗ ಇನ್ನಷ್ಟು ಏರಿಕೆ ಕಂಡಿದೆ.ಮಂಗಳವಾರದಂದು ಚಾಲಿ ಅಡಿಕೆ ಧಾರಣೆಯಲ್ಲಿ ತೀರಾ ಏರಿಕೆ ಕಂಡಿದೆ.ಹಳೆ ಅಡಿಕೆ 193 ರೂಪಾಯಿ ಹಾಗೂ ಹೊಸ ಅಡಿಕೆ 142 ರೂಪಾಯಿಗೆ ಖರೀದಿಯಾಗಿದೆ.
ಕಳೆದ 40 ದಿನಗಳಿಂದ ಇಳಿಮುಖಗೊಂಡಿದ್ದ ಅಡಿಕೆ ಧಾರಣೆಯು ಈಗ ಮತ್ತೆ ದೀಪಾವಳಿ ಸಮಯದಲ್ಲಿ ಇದ್ದ ಧಾರಣೆಗೆ ಬಂದಿದೆ. ಧಾರಣೆ ಹಿನ್ನಡೆಗೆ ಗುಜರಾತ್ ಹಾಗೂ ಉತ್ತರ ಭಾರತದ ವ್ಯಾಪಾರಿಗಳ ನಿರುತ್ಸಾಹ ಹಾಗೂ ನಿಷಿದ್ಧ ಮಾಸ ಈ ಬಾರಿ ಕಾರಣವಾಯಿತು. ಅದರ ಜೊತೆಗೆ ವ್ಯಾಪರಿಗಳ ಆಟವೂ ಕೂಡಾ ಸಾತ್ ನೀಡಿತ್ತು.ಆದರೆ ಈಗ ಮಾರುಕಟ್ಟೆಗೆ ಹಳೆಅಡಿಕೆ ಕಡಿಮೆ ಬರುತ್ತಿರುದರಿಂದ ಮತ್ತೆ ಧಾರಣೆ ಏರಿಕೆಯಾಗುತ್ತಿದೆ.ಮಂಗಳವಾರದಂದು 193 ರೂಪಾಯಿವರೆಗೆ ಖರೀದಿ ಆಗಿದೆ.ಈಗ ಕೃಷಿಕರು ನಿರೀಕ್ಷಿತ ಧಾರಣೆ ಬಂದಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಅಡಿಕೆ ಮಾರಾಟ ಮಾಡುವ ನಿರ್ಧಾರಕ್ಕೆ ಬರುವುದು ಸೂಕ್ತ ಎನ್ನುವುದು ತಜ್ಞರ ಸಲಹೆ.ಆದರೆ ಒಮ್ಮೆಲೇ ಮಾರುಕಟ್ಟೆಗೆ ಅಡಿಕೆ ಬಿಡುವುದರಿಂದ ಮತ್ತೆ ಮಾರುಕಟ್ಟೆ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ ಇದೇ ಮಾರುಕಟ್ಟೆ ಉಳಿಸಿಕೊಳ್ಳಲು ಕೃಷಿಕರದ್ದೇ ಎಚ್ಚರ ಅಗತ್ಯ. ಹೊಸ ಅಡಿಕೆ ಧಾರಣೆ ಕೂಡಾ ಈಗ ಏರುಹಾದಿಯಲ್ಲಿದೆ. ಮಾರುಕಟ್ಟೆಗೆ ಅಡಿಕೆ ಇನ್ನೂ ಹೊಸಅಡಿಕೆ ನಿರೀಕ್ಷಿತ ಮಟ್ಟದಲ್ಲಿ ಬರದೇ ಇರುವುದರಿಂದ ಧಾರಣೆಯಲ್ಲಿ ಏರಿಕೆ ಕಾಣುತ್ತಿದೆ.ಕೃಷಿಕರು ಮನಸು ಮಾಡಿದರೆ ಇದು ಕೂಡಾ ಏರಿಕೆಯಾಗಬಹುದು.ಈಗಿನ ಅಂದಾಜು ಪ್ರಕಾರ 150 ರೂಪಾಯಿಗೆ ತಲಪುವ ಸಾಧ್ಯತೆ ಇದೆ.ಸದ್ಯದ ಪರಿಸ್ಥಿತಿಯಲ್ಲಿ ಹಳೆ ಅಡಿಕೆ ಮತ್ತು ಹೊಸ ಅಡಿಕೆ ಧಾರಣೆಯಲ್ಲಿ ತೀರಾ ವ್ಯತ್ಯಾಸ ಇದೆ.ಇದುವರೆಗೆ ಇಷ್ಟು ವ್ಯತ್ಯಾಸ ಇದ್ದಿರಲಿಲ್ಲ ಎನ್ನುವುದನ್ನು ಕೃಷಿಕರು ಗಮನಿಸಬೇಕಾಗುತ್ತದೆ.ಹೊಸಅಡಿಕೆ ಮಾರುಕಟ್ಟೆ ಬರುತ್ತಿದ್ದಂತೆಯೇ ಹಳೆ ಅಡಿಕೆ ಧಾರಣೆಯಲ್ಲಿ ಇಳಿಕೆಯಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ ಇದುವರೆಗೆ ಹೊಸ ಅಡಿಕೆ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ.
------------------------------------------------------------
No comments:
Post a Comment